Tuesday, 29 December 2020

ಕುವೆಂಪು ಜನ್ಮ ದಿನಾಚರಣೆ

 ಶ್ರೀ ಸದ್ಗುರು ಕಬೀರಾನಂದಸ್ವಾಮಿ ವಿದ್ಯಾಪೀಠ, (ರಿ ) ಚಿತ್ರದುರ್ಗ

ಎಸ್.ಎಸ್.ಕೆ.ಎಸ್. ಶಿಕ್ಷಣ ಮಹಾವಿದ್ಯಾಲಯ ಚಿತ್ರದುರ್ಗ



ಕುವೆಂಪುರವರು ಕನ್ನಡ ಸಾಹಿತ್ಯಕ್ಕೆ ವಿಶೇಷ ಹಾಗೂ ವಿಶಿಷ್ಟ ಸಾಹಿತ್ಯ ಕೃಷಿಯಲ್ಲಿ ತಮ್ಮ ಬದುಕನ್ನು ಮೀಸಲಿಟ್ಟು, ಕನ್ನಡ ಸಾಹಿತ್ಯಕ್ಕೆ ಹೊಸ ಭಾಷ್ಯವನ್ನು ಬರೆದ ರಸಋಷಿ ರಾಷ್ಟ್ರಕವಿ ಕುವೆಂಪು. ಕನ್ನಡ ಭಾಷೆ, ಕಾವ್ಯ, ಕಾದಂಬರಿ, ನಾಟಕ, ಕವಿತೆ ಹಾಗೂ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಹೊಸಚಾಪನ್ನು ಮೂಡಿಸಿದ ಮಹಾಕವಿ ಕುವೆಂಪುರವರು ಆಧುನಿಕ ಕನ್ನಡ ಸಾಹಿತ್ಯಕ್ಕೆ ಯುಗಪ್ರವರ್ತಕರಾಗಿದ್ದಾರೆಂದು ಎಂದು ಡಾ ನೆಲ್ಲಿಕಟ್ಟೆ ಎಸ್.ಸಿದ್ದೇಶ್, ಪ್ರಾಧ್ಯಾಪಕರು ಕುವೆಂಪು ವಿಶ್ವವಿದ್ಯಾಲಯ ಶಂಕಟಘಟ್ಟ ರವರು ಚಿತ್ರದುರ್ಗ ನಗರದ ಎಸ್.ಎಸ್.ಕೆ.ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿ "ಕುವೆಂಪು ಜನ್ಮದಿನಾಚರಣೆಯ" ಅಂಗವಾಗಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲ್ಲಿ "ಆಧುನಿಕ ಕನ್ನಡ ಸಾಹಿತ್ಯ ಮತ್ತು ಕುವೆಂಪು" ವಿಷಯ ಕುರಿತು ಮಾತನಾಡಿದರು.

                 ಕುವೆಂಪುರವರು ಸರ್ವಕಾಲಕ್ಕೂ ಅನುಸರಣೀಯವಾದ ಬದುಕು ಮತ್ತು ಬರಹವನ್ನು ನೀಡಿರುವ   ಅಪರೂಪದ ವ್ಯಕ್ತಿ-ಶಕ್ತಿಯಾಗಿದ್ದಾರೆ. ಅವರು ತಾ ನು ಬದುಕಿದಂತೆ ಬರೆದವರು, ತಾನು ಬರೆದಂತೆ ಬದುಕಿದ ವಿಶೇಷ ವ್ಯಕ್ತಿತ್ವದವರು. ಕುವೆಂಪು ಹಾಡಿದರೆಂದರೆ ಮೌಢ್ಯಗಳು ಯುಗ ಮೌಲ್ಯಗಳ ಯುಗವಾಗುವುದು!, ಜಾತಿಜಲ ಬತ್ತುವುದು, ಮತಮರ ಒಣಗುವುದು!, ಕುವೆಂಪು ಹಾಡಿದರೆಂದರೆ ಆಧ್ಯಾತ್ಮ ಅರಳುವುದು, ಪತಿತ ಜೀವನ ಪಾವನವಾಗುವುದು. ವಿಷಮಾನವ ವಿಶ್ವಮಾನವನಾಗುವನು!, ಕುವೆಂಪು ಹಾಡಿದರೆಂದರೆ ಪ್ರೀತಿ-ನೀತಿ ಗೆಲ್ಲುವುದು, ಸಾತ್ವಿಕತೆಯ ಸತ್ವ ಬೆಳಗುವುದು, ವಿಕೃತಿ ಆಕೃತಿಯಾಗುವುದು, ಬಡವರ ಬದುಕು ಬಲಿಯುವುದು, ಕೊಳಲು ಉಲಿಯುವುದು ಪಾಂಚಜನ್ಯ ಮೊಳಗುವುದು, ಮಾಲಿನ್ಯ ಮಾಣಿಕ್ಯವಾಗುವುದು ಎಂದು ತಾವೇ ಬರೆದ ಕವನ ವಾಚನದೊಂದಿಗೆ ಕುವೆಂಪು ಇಂತಹ ತನ್ನ ಕಾವ್ಯ ಶಕ್ತಿಯ ಮೂಲಕ ಪ್ರಕೃತಿಯ ಪ್ರಖರತೆಯನ್ನು ಅನಾವರಣಗೊಳಿಸಿದವರು, ಕಾವ್ಯಕಡಲ ಒಡಲ ಮೂಲಕ ಇಳೆಯ ಇರುವಿನಲ್ಲಿ ಅರಿವಿನ ಬೀಜ ಬಿತ್ತಿದವರು, ಬೆಳೆಯನ್ನು ಬೆಳೆದವರು. 'ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು' ಎಂಬ ಮಾನವ ಪ್ರೀತಿಯ ವಿಶ್ವಮಾನವತೆಯ ನವಯುಗವಾಣಿನ್ನು ಘೋಷಿಸಿದ ಕನ್ನಡ ನಾಡು, ನುಡಿ, ಜನತೆಯ ಆಸ್ಮೀತೆಯ ಪ್ರವರ್ತಕ ಪುರುಷ ಕುವೆಂಪು.

 ಕುವೆಂಪುರವರ ಬದುಕು ಮತ್ತು ಬರಹವನ್ನು ಅಧ್ಯಯನದಲ್ಲಿ ತೊಡಗಿದರೆ ನಮ್ಮಲ್ಲಿರುವ ಕಲ್ಮಶಗಳು ಕರಗುತ್ತವೆ, ಕೀಳಿರಿಮೆಗಳು ನಾಶವಾಗುತ್ತವೆ. ಆಧುನಿಕ ತಾಂತ್ರಿಕ ಯುಗದ ಒತ್ತಡದ, ಆತುರದ, ಆತಂಕಗಳನ್ನು ಹೊಗಲಾಡಿಕೊಳ್ಳಲು ಕುವೆಂಪು ಓದು ಅಗತ್ಯವಾಗಿದೆ. ಮನುಜಮತ, ವಿಶ್ವಪಥ, ಸರ್ವೋದಯ,ಸಮನ್ವಯ ಮತ್ತು ಪೂರ್ಣದೃಷ್ಟಿಗಳೆಂಬ ಪಂಚಮಂತ್ರಗಳ ಅನುಸರಣೆ ಮತ್ತು ಅಧ್ಯಯನದ ಮೂಲಕ ನಮ್ಮಲ್ಲೇರ ಬದುಕನ್ನು ಸಾರ್ಥಕಗೊಳಿಸಿಕೊಳ್ಳೊಣವೆಂದು ಕರೆನೀಡಿದರು. 

     ದಿವ್ಯಸಾನ್ನಿಧ್ಯವಹಿಸಿದ್ದ ಶ್ರೀ ಸದ್ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಸ್ವಾಮೀಜಿಯವರು ಕುವೆಂಪುರವರ ಅಧ್ಯಯನ ನಮ್ಮೇಲ್ಲರ ಬದುಕಿಗೆ ಅಮೃತವಾಣಿಯಾಗಿದೆ. ಅವರ ಸಾಹಿತ್ಯ ಶಕ್ತಿಯ ಮೂಲಕ ನಾಡು ನುಡಿಯನ್ನು ಅತ್ಯುನ್ನತಮಟ್ಟಕ್ಕೆ ಎತ್ತರಿಸಿದ ಮಹಾಪುರುಷರಾಗಿದ್ದಾರೆಂಬ ನುಡಿಗಳೊಂದಿಗೆ ವಿಶೇಷ ಉಪನ್ಯಾಸ ನೀಡಿದ ಡಾ. ನೆಲ್ಲಕಟ್ಟೆ ಸಿದ್ದೇಶರವರನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಡಿ.ಪಿ.ಇಡಿ. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನಿರಂಜನಮೂರ್ತಿ, ಪದವಿಪೂರ್ವ ಕಾಲೇಜ್ ಪ್ರಾಂಶುಪಾಲರಾದ  ಶ್ರೀ ಪ್ರಶಾಂತ್ , ಹಾಗೂ ಬಿ.ಇಡಿ. ಕಾಲೇಜಿನ ಉಪನ್ಯಾಸಕರಾದ ವಿಜಯ್ ಕುಮಾರ್ , ಭುವನೇಶ್ವರಿ ಮತ್ತು ಎಲ್ಲ ಬೋಧಕ ಬೋಧಕೇತರ ಸಿಬ್ಬಂದ್ಧಿಗಳು ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರೀಶ್ ಟಿ ಸ್ವಾಗತಿಸಿದರು, ಉಪನ್ಯಾಸಕಿ ಶ್ರೀಮತಿ ನೇತ್ರಾವತಿ ಅತಿಥಿಗಳನ್ನು ಪರಿಚಯಿಸಿದರು, ಪ್ರಶಿಕ್ಷಣಾರ್ಥಿ ಜಗದೀಶ್ ಪ್ರಾರ್ಥಿಸಿದರು, ಜಯ್ಯಪ್ಪ ವಂದಿಸಿದರು, ಯಶವಂತ್ ನಿರೂಪಿಸಿದರು.





No comments:

Post a Comment

ಬಿ.ಇಡಿ. ಪದವಿ ಫಲಿತಾಂಶ ಪ್ರಕಟಣೆ 2024

  ಫಲಿತಾಂಶ ಪ್ರಕಟಣೆ 2024 ದಾವಣಗೆರೆ ವಿಶ್ವವಿದ್ಯಾಲಯದ ಬಿ.ಇಡಿ. ಪದವಿ ಜನವರಿ 2024 ರಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ನಗರದ ಶ್ರೀ ಸದ್ಗ...