“ ಮಾಜಿ ಸೈನಿಕರಾದ ಶ್ರೀ ಪ್ರಕಾಶ್ ರವರಿಂದ ಸ್ವಾತಂತ್ರ್ಯೋತ್ಸವ ದಿನದ ಧ್ವಜಾರೋಹಣ ”
ದೇಶದ ಜನತೆ ಶಾಂತಿ ಮತ್ತು ಸ್ವಾವಲಂಬನೆಯಿಂದ ಜೀವನ ನಡೆಸಬೇಕೆಂದರೆ ಪ್ರತಿಪ್ರಜೆಯಲ್ಲಿ ದೇಶಭಕ್ತಿ, ದೇಶಪ್ರೇಮ ಅಗತ್ಯವಾದುದು. ಸ್ವಾತಂತ್ರ್ಯ ಪಡಿಯಲು ಹೋರಾಡಿದ ಸಾವಿರಾರು ಹೋರಾಟಗಾರರ ಹೋರಾಟ, ಬಲಿದಾನಗಳಿಂದ ನಾವೇಲ್ಲರೂ ಸ್ವತಂತ್ರದಿಂದ ಬದುಕುವಂತಾಗಿದೆ. ನಮ್ಮ ಇಂದಿನ ಸ್ವತಂತ್ರದ ಬದುಕಿಗೆ ಕಾರಣಕರ್ತರಾದ ಅಸಂಖ್ಯಾತ ದೇಶಪ್ರೇಮಿಗಳನ್ನು ಸ್ಮರಿಸುವ ಸುದಿನವಾಗಿದೆ ಎಂದು ಮಾಜಿ ಸೈನಿಕರಾದ ಶ್ರೀ ಪ್ರಕಾಶ್ ರವರು ಶ್ರೀ ಸದ್ಗುರು ಕಬೀರಾನಂದಸ್ವಾಮಿ ಬಿ.ಇಡಿ. ಮತ್ತು ನರ್ಸಿಂಗ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಭವಿಷ್ಯದ ಸಮಾಜಕ್ಕೆ ಈ ದಿನದ ಮಹತ್ವವನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ತಿಳಿಸುವ ಪ್ರಯತ್ನವನ್ನು ನಾವು ಮಾಡಬೇಕು. ದೇಶಾಭಿಮಾನ ನಮ್ಮ ಸಮಾಜದ, ಸಂಸ್ಕøತಿಯ ಒಂದು ಭಾಗವಾಗಬೇಕು. ಶಿಕ್ಷಣದ ಪ್ರಾರಂಭದ ಅವಧಿಯಲ್ಲಿಯೇ ದೇಶಪ್ರೇಮದ ಪರಿಚಯ ಹಾಗೂ ಪರಿಪಾಠವನ್ನು ರೂಢಿಸಬೇಕು. ಸಮಾಜದ ಹಲವು ಸಮಸ್ಯೆಗಳಿಗೆ ನಮ್ಮಲ್ಲಿರುವ ಹಣ, ಆಸ್ತಿಯ ವ್ಯಾಮೋಹವೇ ಕಾರಣವಾಗಿದೆ, ಇಂತಹ ಸಮಸ್ಯೆಗೆ ನಮ್ಮಿಂದ ಸಾಧ್ಯವಾಗುವ ಪರಿಹಾರವನ್ನು ನಾವೇ ಕಂಡುಕೊಳ್ಳಬೇಕು. ವಿದ್ಯಾರ್ಥಿಗಳು ದಿನನಿತ್ಯ ಓದುವುದನ್ನು ರೂಢಿಸಿಕೊಳ್ಳಬೇಕು, ನೈಜ ಇತಿಹಾಸವನ್ನು ತಿಳಿಯಬೇಕು. ದೇಶೀಯ ವಸ್ತುಗಳು ಹಾಗೂ ಉತ್ಪನ್ನಗಳನ್ನು ಬಳಸುವುದನ್ನು ರೂಢಿಸಿಕೊಳ್ಳಬೇಕು ಹಾಗೂ ಇತರರಿಗೂ ತಿಳಿಸಬೇಕು. ಇಂತಹ ಪ್ರಯತ್ನಗಳಿಂದ ದೇಶವನ್ನು ಆಧುನಿಕ ಗುಲಾಮಗಿರಿಯಿಂದ ಹೊರತರಬೇಕು. ಅಮೂಲ್ಯವಾದ ಮಾನವ ಜೀವನವನ್ನು ಸಂತೋಷದಿಂದ ನೆಮ್ಮದಿಯಿಂದ ಸನ್ಮಾರ್ಗದಲ್ಲಿ ನಡೆಸುವಂತೆ ಕರೆನೀಡಿದರು ಹಾಗೂ ಸೈನಿಕ ಸೇವೆಯ ಅನಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಡಿ.ಪಿ.ಇಡಿ. ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ನಿರಂಜನಮೂರ್ತಿಯವರು ಮಾತನಾಡಿ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟನೆಗಳನ್ನು ತಿಳಿಸಿ, ಪ್ರಸ್ತುತ ಸಮಾಜದಲ್ಲಿ ನಾವೆಲ್ಲರೂ ಸ್ವತಂತ್ರರು, ನಮಗೆ ಸಿಕ್ಕಿರುವ ಈ ಅಮೂಲ್ಯವಾದ ಸ್ವಾತಂತ್ರ್ಯವನ್ನು ನಾವುಗಳು ನಮ್ಮ ಉತ್ತಮ ಜೀವನವನ್ನು ಕಟ್ಟಿಕೊಂಡರೆ ಸಾರ್ಥವಾಗುತ್ತದೆ. ಎಲ್ಲ ಬೇಧಭಾವಗಳನ್ನು ಮರೆತು ನಾವೇಲ್ಲರೂ ಭಾರತೀಯರೆಂಬ ಏಕತೆಯ ಭಾವನೆ ನಮ್ಮಲ್ಲಿ ಇಂದು ಮೂಡುವಂತಾಗಿದೆ. ಸ್ವಾವಲಂಬನೆ, ಶಿಸ್ತು, ಸರಳತೆಯ ಜೀವನವನ್ನು ರೂಢಿಸಿಕೊಳ್ಳಬೇಕು. ಮಹಾತ್ಮಗಾಂಧೀಜಿಯವರ ಸರಳತೆ, ಅಹಿಂಸಾ ತತ್ವದ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಬಿ.ಇಡಿ. ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರೀಶ್ ರವರು ಮಾತನಾಡುತ್ತಾ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ನಾವೇಲ್ಲರೂ ಭಾರತೀಯರೆಂಬ ದೇಶಾಭಿಮಾನ ಬೆಳೆಯುವಂತಹ ದೃಢನಿರ್ಧಾರವನ್ನು ಕೈಗೊಂಡ ಸರ್ಕಾರಕ್ಕೆ ಹಾಗೂ ದೇಶದ ಪ್ರಧಾನಮಂತ್ರಿಯಾದ ಸನ್ಮಾನ್ಯ ನರೇಂದ್ರಮೋದಿಯವರಿಗೆ ಕೃತಜ್ಞತೆಗಳನ್ನು ತಿಳಿಸಿದರು. ಸ್ವತಂತ್ರ ಹೋರಾಟದ ಧೃವತಾರೆಗಳಾದ ಮಹಾತ್ಮಗಾಂಧೀ, ಭಗತ್ಸಿಂಗ್, ಸುಭಾಷ್ ಚಂದ್ರಬೋಸ್ರ ದೇಶಾಭಿಮಾನದ ಹೋರಾಟವನ್ನು ನೆನಪಿಸಿದರು. ದೇಶಾಭಿಮಾನವು ಮಾನವ ಮಾನವರ ಮಧ್ಯೆ ಉತ್ತಮ ಭಾಂದವ್ಯ, ಸಹಬಾಳ್ವೆ ಸಹಕಾರ ಹಾಗೂ ಭ್ರಾತೃತ್ವದ ಭಾವನೆಯನ್ನು ಬೆಳೆಸಬೇಕು. ಅಂಧ ದೇಶಾಭಿಮಾನದಿಂದ ಯುವ ಜನತೆ ಸಮಸ್ಯೆಗಳಲ್ಲಿ ಸಿಲುಕುತ್ತಿದ್ದಾರೆ. ದೇಶಾಭಿಮಾನ ಎನ್ನುವುದು ಭೌತಿಕವಾಗಿ ಕಾಣವುದಲ್ಲ, ಅದನ್ನು ಭಾವನಾತ್ಮಕತೆಗೆ ಸೀಮಿತಗೊಳಿಸದೆ, ದೇಶಾಭಿಮಾನವು ನಮ್ಮ ದಿನನಿತ್ಯದ ಬದುಕಿನಲ್ಲಿ ನಾವೇ ರೂಢಿಸಿಕೊಳ್ಳುವುದಾಗಿದೆ ಎಂದು ತಿಳಿಸಿದರು. ಉಪನ್ಯಾಸಕರಾದ ಹಾಗೂ ಮಾಜಿ ಸೈನಿಕರಾದ ಶ್ರೀ ಪ್ರಕಾಶ್ರವರ ಪತ್ನಿ ಶ್ರೀಮತಿ ರೂಪರವರು ಮಾತನಾಡಿ ರಾಷ್ಟ್ರೀಯ ಹಬ್ಬಗಳು ನಮ್ಮ ಮನೆಯ ಹಬ್ಬಗಳಂತೆ ಅತ್ಯಂತ ಸಂಭ್ರಮದಿಂದ ಆಚರಿಸುವಂತಾಗಬೇಕು, ಅಂತಹ ದೇಶಾಭಿಮಾನ ಇಂದಿನ ಯುವಶಕ್ತಿಗೆ ಬೆಳೆಸಿಕೊಳ್ಳುವಂತೆ ಕರೆನೀಡಿದರು. ಶ್ರೀಮತಿ ನೇತ್ರಾವತಿಯವರು ಸ್ವತಂತ್ರ ಹೋರಾಟಗಾರರ ಹೋರಾಟದ ಘಟನೆಗಳನ್ನು ತಿಳಿಸಿದರು. ಬಿ.ಇಡಿ. ಉಪನ್ಯಾಸಕರಾದ ವಿಜಯ್ ಕುಮಾರ್, ಪ್ರಶಾಂತ್ ಹಾಗೂ ಪ್ಯಾರಮೇಡಿಕಲ್ ಕಾಲೇಜಿ ಪ್ರಾಂಶುಪಾಲರಾದ ಶ್ರೀ ರಾಘವೇಂದ್ರರವರು, ಐಶ್ವರ್ಯ ಮತ್ತು ಬಿ.ಇಡಿ. ಹಾಗೂ ನರ್ಸಿಂಗ್, ಪ್ಯಾರಮೇಡಿಕಲ್ ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮ ನಡೆಸಿಕೊಟ್ಟರು.